Monday, November 1, 2010

ಶುಭಾಶಯ

ಕನ್ನಡ ಬಂದೂ ಕನ್ನಡ ಮಾತಾಡದೇ ಇರೋ ಅವಿವೇಕಿಗಳೇ, ಕನ್ನಡನಾಡಿನಲ್ಲಿದ್ದೂ ಕನ್ನಡ ಕಲಿಯಲು ನಿರಾಕರಿಸುವ ಅಹಂಕಾರಿಗಳೇ, ಹುಟ್ಟಿನಿಂದ ಕನ್ನಡ ಮಾತನಾಡಿಯೂ ಕನ್ನಡದ ಬಗ್ಗೆ ಕೀಳು ಚಿಂತನೆಗಳಿರುವ ದುರ್ಜನರೇ, ಕನ್ನಡ ಚಿತ್ರಗಳನ್ನೂ ನೋಡದೆಯೂ ಕನ್ನಡ ಸಿನೆಮಾಗಳಿಗೆ ಬಯ್ಯುವ ಕೆಟ್ಟ ಚಟವಿರುವವರೇ, ಕನ್ನಡವೇ ಮಾತೃಭಾಷೆಯಾಗಿದ್ದರೂ ಒಪ್ಪಿಕೊಳ್ಳದೆ ಆಂಗ್ಲರನ್ನು ಹಿಂಬಾಲಿಸುವ ಕುರುಡರೇ, ಕನ್ನಡ ನಾಡಿನಲ್ಲಿಯೇ ಕಲಿತು ದೊಡ್ಡವರಾಗಿ ಬೇರೆ ದೇಶದಲ್ಲಿ ನೆಲೆಸಿ ಕನ್ನಡದ ಬಗ್ಗೆಯೇ ಕೀಳರಿಮೆ ಹೊಂದಿರುವ ನೀಚರೇ, ಕನ್ನಡ ಸಂಸ್ಕೃತಿಯನ್ನು ಮೂಲೆಗುಂಪು ಮಾಡಲು ಹೊರಟಿರುವ ಮೂಢರೇ, ಕನ್ನಡನಾಡನ್ನು ತುಂಡರಿಸಲು ಹೊರಟಿರುವ ದುಷ್ಟರೇ, ಕನ್ನಡನಾಡಿನಲ್ಲಿ ದೊಡ್ಡ ಹೆಸರನ್ನು ಗಳಿಸಿಯೂ ಚಿಕ್ಕಬುದ್ಧಿಯ ಕೆಲಸ ಮಾಡುತ್ತಿರುವ ಬುದ್ಧಿಜೀವಿಗಳೇ ಹಾಗೂ ಕರ್ನಾಟಕದ ಕನ್ನಡದ ಮಾನವನ್ನು ನಿರಂತರವಾಗಿ ಬೀದಿಯ ಮಧ್ಯೆ ಮತ್ತು ರೆಸಾರ್ಟ್ಗಳ ಒಳಗೆ ಹರಾಜಿಗಿಡುತ್ತಿರುವ ರಾಜಕಾರಣಿಗಳೇ... ಎದ್ದೇಳಿ, ರಾಜ್ಯೋತ್ಸವ ಮತ್ತೆ ಬಂದಿದೆ...
ಸತತವಾಗಿ ಕನ್ನಡಸೇವೆಯನ್ನು ಮಾಡುತ್ತಿರುವ ಸಾಹಿತಿಗಳಿಗೆ, ಕನ್ನಡದ ಮೇಲಿನ ನಿಜವಾದ ಪ್ರೀತಿಯನ್ನು ಉಳಿಸಿಕೊಂಡು ಕನ್ನಡದ ರಕ್ಷಣೆ ಮಾಡುತ್ತಿರುವ ಕನ್ನಡಿಗರೇ, ಸಮಯ ಸಿಕ್ಕಾಗ ಅಷ್ಟಿಷ್ಟು ಕನ್ನಡ ಪ್ರೀತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ಕನ್ನಡಾಭಿಮಾನಿ ಜನರೇ, ಬ್ಲಾಗ್ ಹಾಗೂ ಇನ್ನಿತರ ಮಾಧ್ಯಮಗಳಿಂದ ಜಗತ್ತಿನೆಲ್ಲೆಡೆ ಕನ್ನಡದ ಕಂಪು ಪಸರಿಸುತ್ತಿರುವ ಕಂಪ್ಯೂಟರ್ ಪ್ರಿಯ ಕನ್ನಡಾಭಿಮಾನಿಗಳೇ, ಕಂಗ್ಲಿಷ್ ಚಾನೆಲ್ ಎನ್ನಬಹುದಾದ ದೂರದರ್ಶನದ ಮೂಲಕವಾದರೂ ಕನ್ನಡದ ಅಳಿವು-ಉಳಿವಿನ ಹೋರಾಟಕ್ಕೆ ತಮ್ಮದೇ ಆದ ಸಹಾಯವನ್ನು(ಕೆಲವು ಬಾರಿ ಋಣಾತ್ಮಕವಾಗಿ) ಮಾಡುತ್ತಿರುವ ಮಾಧ್ಯಮ ಮಿತ್ರರೇ, ಹಾಗೂ ಕರ್ನಾಟಕದ ಮಹಾಜನತೆಯೇ, ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

0 ಪ್ರತಿಕ್ರಿಯೆಗಳು:

Post a Comment