ಖಂಡಿತಾ ಹೀಗೆಲ್ಲಾ ಆಗುತ್ತದೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ಹುಚ್ಚು ಹಿಡಿದಂತಾಗಿತ್ತು. ಜಗತ್ತನ್ನೇ ಕಳೆದುಕೊಂಡಿದ್ದೆ. ಖಗ್ರಾಸ ಸೂರ್ಯಗ್ರಹಣದ ಸಮಯದ ಸೂರ್ಯನಂತಾಗಿದ್ದೆ. ಬೆಳಕಿನ ಸುಳಿವೇ ಇರಲಿಲ್ಲ. ಎಲ್ಲವೂ ಕತ್ತಲೆ. ದುಃಖದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದೆ. ನನ್ನ ಮನದ ಮಾತನ್ನೆಲ್ಲಾ ಕೇಳಲು ಒಬ್ಬರಾದರೂ ಬೇಕಿತ್ತು. ಅಳುವಂತೂ ಬಿಕ್ಕಳಿಸಿ ಬರುತ್ತಿತ್ತು.ಜಗತ್ತೇ ನನ್ನೆಡೆಗೆ ತಾತ್ಸಾರ ಮನೋಭಾವ ತಾಳಿತ್ತು. ದೇವರುಗಳಿಗಂತೂ ನನ್ನ ನೆನಪೇ ಇರಲಿಲ್ಲವೇನೋ. ಮರುಭೂಮಿಯಲ್ಲಿ ನೀರು ಹುಡುಕಿದರೆ ಸುಲಭದಲ್ಲಿ ಸಿಕ್ಕೀತೇ? ಹಾಗೆಯೇ ನನ್ನ ಈ ದುಃಖವೂ ಜೀವನವಿಡೀ ಮುಗಿಯದು. ವರ್ಷಾನುಗಟ್ಟಲೆ ಮಳೆಗಾಗಿ ಕಾದಿರುವ ಇಳೆಯಂತೆ ಚಡಪಡಿಸುತ್ತಿತ್ತು. ನೀರೆ ಕಾಣದೆ ಬಾಯ್ಬಿಟ್ಟ ಭೂಮಿಯೇ ನನ್ನನ್ನು ನುಂಗಲು ಕಾದಂತೆ ಭಾಸವಾಗುತ್ತಿತ್ತು. ನನ್ನ ತಪ್ಪೆನೆಂದು ಯೋಚಿಸಲೋ? ಅಥವಾ ನನ್ನ ಅದೃಷ್ಟವನ್ನು ಹಳಿಯಲೋ? ಅಥವಾ ನನ್ನ ಹಣೆಬರಹವೇ ಎಲ್ಲವನ್ನೂ ಕಳೆದುಕೊಳ್ಳುವುದು ಎಂದು ಸುಮ್ಮನಾಗಲೋ? ಒಂದೂ ತಿಳಿಯದು...
ಹಿಂದಿನ ದಿನವಷ್ಟೇ ಕಡಲಿನ ದರ್ಶನವಾಗಿತ್ತು. ಅಲ್ಲಿ ನನ್ನ ತಲೆಯಲ್ಲಿ ಸುಳಿದ ಎಷ್ಟೋ ಯೋಚನೆಗಳು ಒಂದೇ ದಿನದೊಳಗೆ ನನಗೇ ಅನುಭವವಾಗಬಹುದು ಎಂಬ ಪರಿವೆಯೂ ಇರಲಿಲ್ಲ. ಆ ಕಡಲಿನ ನಡುವಿನಲ್ಲಿರುವ ಬಂಡೆಯ ಮೇಲೆ ಕುಳಿತು ನನ್ನನ್ನೇ ನಾನು ಮರೆತಿದ್ದೆ. ಎಷ್ಟೋ ವಿಚಾರಗಳು ತಲೆಯಲ್ಲಿ ಸುಲಿಯುತ್ತಿದ್ದವು. ಪ್ರತಿ ಅಲೆಯೂ ದಡಕ್ಕೆ ಜೋರಾಗಿ ಬಡಿಯುತ್ತಿದ್ದಾಗಲೂ ಮನಸ್ಸು ಜೀವನದ ಕಷ್ಟ,ಸಂಘರ್ಷಗಳ ಬಗ್ಗೆಯೇ ಚಿಂತಿಸುತ್ತಿತ್ತು. ಈ ಅಲೆಗಳು ಏಕೆ ಪುನಃ ಪುನಃ ಅಪ್ಪಳಿಸುತ್ತಲೇ ಇರುತ್ತವೆ? ಮಳೆಗಾಲದಲ್ಲಂತೂ ಈ ಅಲೆಗಳ ಅಬ್ಬರ ತೀವ್ರ; ಮನುಷ್ಯನ ಜೀವನದಲ್ಲಿ ಕಷ್ಟಗಳೆಲ್ಲ ಒಂದೇ ಬಾರಿ ಬಂದಂತೆ. ತೀರಕ್ಕಂತೂ ತುಂಬಾ ಕಷ್ಟ.ತೀರದ ಮರಳು ಮಣ್ಣು ಎಲ್ಲವೂ ಸಮುದ್ರದ ಹೊಟ್ಟೆಗೆ. ಆದರೆ ಬಂಡೆಯ ಕಥೆ? ಎಷ್ಟು ಬಾರಿ ಅಲೆ ಅಪ್ಪಳಿಸಿದರೂ ಏನೂ ಪ್ರಯೋಜನವಿಲ್ಲ. ನೀರೇ ಚಿಮ್ಮುತ್ತದಲ್ಲದೆ ಬಂಡೆಗೇನೂ ಆಗದು. ಬಂಡೆಯ ಮೇಲೆ ಸ್ವಲ್ಪ ನೀರು ಬಿದ್ದು ಬಂಡೆಯೇ ಶುದ್ಧ. ಅಲೆಗಳ ಶಕ್ತಿಯೇ ವ್ಯರ್ಥ. ಹಾಗಾದರೆ ನಮ್ಮ ಮನಸ್ಸು ಬಂಡೆಯಂತಿರಬೇಕೋ? ಅಥವಾ ಮರಳ ದಿಬ್ಬವಾದ ತೀರದಂತಿರಬೇಕೋ? ನಾನಂತೂ ಕಾಣೆ.ಮನುಸ್ಸು ಬಂಡೆಯಂತಿದ್ದರೆ ಕಷ್ಟಗಳಿಗೆ ಜಗ್ಗಲಾರೆವು ಎಂಬ ಯೋಚನೆಯಂತೂ ನಿಜ. ಆದರೆ ಅದನ್ನು ಪಾಲಿಸುವುದಂತೂ ಬಹಳ ಕಷ್ಟ. ಹಾಗೆಯೇ ನಾವು ಜೀವಿಸುತ್ತಿರುವ ಸಮಾಜದಲ್ಲಿ ನಾವೇ ಮುಖ್ಯ ಖಂಡಿತ ಅಲ್ಲ. ಇತರರ ಭಾವನೆಗಳನ್ನೂ ನಾವು ಗೌರವಿಸಬೇಕಾಗುತ್ತದೆ.ಇತರರ ಭಾವನೆ,ಆಲೋಚನೆಗಳೇ ನಮ್ಮ ಜಗತ್ತನ್ನು ರೂಪಿಸುವುದು ಎಂಬುದೂ ನಮಗೆ ತಿಳಿದಿರಬೇಕಾಗುತ್ತದೆ. ಅವರ ಭಾವನೆಗಳಿಗೂ ಬೆಲೆ ಬೇಡವೇ? ಬಂಡೆಯಂತಿದ್ದರೆ ಖಂಡಿತಾ ನಾವು ಎಲ್ಲರೂ ಇರುವ ಈ ಜಗತ್ತಿನಲ್ಲಿಯೂ ಏಕಾಂಗಿಯಾಗಬೇಕಾಗುತ್ತದೆ. ಬಂಡೆಗೆ ಬೇರೆಯವರೇನಾದರೂ ಪರವಾಗಿಲ್ಲ.ತಾನಂತೂ ಸ್ಥಿರ, ಅಲುಗಾಡದು,ಬದಲಾಗದು. ಮಳೆಯಾಗಲಿ,ಬಿಸಿಲಾಗಲಿ,ಸುನಾಮಿಯೇ ಬರಲಿ,ಎಲ್ಲವೂ ಒಂದೇ. ಆದರೆ ಮರಳು ಹಾಗಲ್ಲ. ಹೊಂದಿಕೊಳ್ಳುವುದೇ ಅದರ ಗುಣ. ನಾವೂ ಏಕೆ ಹಾಗೇ ಇರಬಾರದು? ಮರಳಿನಂತೆ ಎಲ್ಲದಕ್ಕೂ ಮೈಯೊಡ್ಡಿ ಜೈಸಬೇಕೋ? ಅಥವಾ ಬಂಡೆಯಂತೆ ಗಟ್ಟಿ ನಿಲ್ಲಬೇಕೋ? ಸಮುದ್ರದ ಅಬ್ಬರ ನೋಡುತ್ತಾ ನನ್ನ ಜೀವನವೇ ಕಗ್ಗಂಟಾಗಿ ಯೋಚನಾಲಹರಿಯೇ ಸ್ತಬ್ಧವಾಗಿತ್ತು.
ಹಿಂದಿನ ದಿನದ ಯೋಚನೆಗಳು ಮರುದಿನವೇ ಕಣ್ಣ ಮುಂದೆ ನನಗೆ ಸವಾಲಾಗಿ ನಿಂತಿದ್ದವು.ನಾನು ಸುನಾಮಿಯ ಅಲೆಗಳ ನಡುವೆ ಕಾಣೆಯಾದನ್ತಿತ್ತು. ಸಿಡಿಲಿನ ತೀವ್ರತೆಯ ನಡುವೆ ಬೇರೆ ಬೆಳಕಿಗೆ ಜಗವಿದ್ದೀತೆ? ನಾನು ಮಾಡಿದ ತಪ್ಪೋ ಅಥವಾ ಕಾಕತಾಳೀಯವೋ,ನನ್ನ ಜೀವನದಲ್ಲಿ ಹಿಂದೆ ದೊರಕಿದ್ದ ತಿರುವೊಂದು ಮತ್ತೆ ನನ್ನನ್ನು ಮೊದಲಿದ್ದ ಜಾಗಕ್ಕೇ ತಂದು ಬಿಟ್ಟಿತ್ತು, ಆದರೆ ಈಗ ನಾನು ಜರ್ಜರಿತನಾಗಿದ್ದೆ.ನಾನು ಬಂಡೆಯಂತೆ ಎಲ್ಲ ನೋವುಗಳನ್ನೂ ಕಡೆಗಣಿಸಬೇಕಿತ್ತೋ ಅಥವಾ ಮರಳಿನಂತೆ ಅಲೆಗಳ ನಡುವೆ ಕರಗಬೇಕಿತ್ತೋ ಅಥವಾ ಆ ಅಲೆಗಳಂತೆಯೇ ಮರಳಿ ಮರಳಿ ತೀರದತ್ತ ಸಾಗಿ ಪ್ರಯತ್ನವನ್ನು ಎಂದೂ ಕೈಬಿಡಬಾರದೋ ತಿಳಿಯದು.ಯಾವ ರೀತಿಯ ಆಕಸ್ಮಿಕಕ್ಕೂ ನಾನಂತೂ ತಯಾರಿರಲಿಲ್ಲ. ನನ್ನ ಪ್ರತಿಬಿಂಬವಾಗಿದ್ದ ಜೀವ ನನ್ನನ್ನು ದೂರ ಮಾಡಿತ್ತು. ನನ್ನ ತಪ್ಪೇನೋ ತಿಳಿಯದು. ದೂರವಾಗಲೂ ಕಾರಣವೂ ತಿಳಿಯದು. ನನಗೋ ಸಹನೆ,ತಾಳ್ಮೆ ಮೊದಲೇ ಕಮ್ಮಿ. ಆ ತಾಳ್ಮೆ ತಪ್ಪಿದ ಮಾತುಗಳೇ ನಾನು ಒಬ್ಬಂಟಿಯಾಗಲು ಕಾರಣವೇ? ಖಂಡಿತಾ ಸಾಧ್ಯವಿಲ್ಲ. ಆ ಜೀವಕ್ಕೆ ನಾನೇನೆಂದು ಖಂಡಿತಾ ತಿಳಿದಿದೆ. ನನ್ನನ್ನು, ನನ್ನ ಮನಸ್ಸನ್ನು ಅರಿಯದಿರಲಂತೂ ಅಸಾಧ್ಯ. ಕಾರಣವೇನೇ ಇದ್ದರೂ ಈಗ ನಾನೂ ಒಬ್ಬಂಟಿ,ನನ್ನ ಪ್ರತಿಬಿಂಬದಂತಿದ್ದ ಜೀವವೂ ಈಗ ಒಬ್ಬಂಟಿ. ಆ ಜೀವವನ್ನುಹುಡುಕುವುದು ಕಷ್ಟದ ಕೆಲಸವೇನಲ್ಲ. ಆದರೆ ಆ ಮೊದಲಿದ್ದ ಅನುಬಂಧವನ್ನು ಇನ್ನೊಮ್ಮೆ ನೋಡುವುದು ಕಷ್ಟಸಾಧ್ಯ.
ನನಗೀಗ ಮುಂದೇನು ಎಂಬುದೇ ದೊಡ್ಡ ಪ್ರಶ್ನೆ. ಶೂನ್ಯವೇ ಕಾಣುತ್ತಿದೆ ಭವಿಷ್ಯದಲ್ಲಿ. ಈಗಂತೂ ನಾನು ಬಾಗಿಲು ಕಿಟಕಿಗಳಿಲ್ಲದ ಕೊನೆಯಲ್ಲಿ ಬಂಧಿಯಾದಂತಿದ್ದೆ. ಆದರೆ ನನಗೆ ಬೇಕಾದುದ್ಯಾವುದೂ ನನ್ನೊಂದಿಗಿಲ್ಲ. ಅದನ್ನೆಲ್ಲ ಹುಡುಕುವ ಶಕ್ತಿಯೂ ನನಗಿಲ್ಲ. ಕಳೆದುಕೊಂಡದ್ದನ್ನು ಮುಂದೆ ಪಡೆಯುವ ವಿಶ್ವಾಸವೇ ಹೊರಟುಹೋಗಿದೆ. ಈ ಭೂಮಿಯಲ್ಲಿ ಹುಟ್ಟಿ ಇಷ್ಟು ದಿನ ಪದೆದುಕೊಂದದ್ದನ್ನೆಲ್ಲ ಹಿಂದಿರುಗಿಸಲು ಬದುಕಬೇಕಷ್ಟೇ. ಇದ್ದುದರಲ್ಲೇ ಸ್ವರ್ಗ ಎಂದು ತಿಳಿಯಬೇಕಷ್ಟೆ.ನನ್ನ ಕಣ್ಣ ಹನಿಗಳೂ ಈಗ ಆಳುತ್ತಿವೆ. ದೇವರ ಬಳಿ ಒಂದೇ ಪ್ರಾರ್ಥನೆ-'ನನ್ನ ದನಿಯಾಗಿದ್ದ ಜೀವಕ್ಕಿನೆಂದೂ ಕಷ್ಟ ಬರದಿರಲಿ.ಸಂತೋಷವೇ ಜೀವನದ ಸಾರವಾಗಲಿ.' ಸಾವಿನ ತನಕವೂ ನನ್ನ ಹೃದಯ ಬಡಿತ ಖಂಡಿತಾ ಆ ದನಿಗಾಗಿಯೇ...
0 ಪ್ರತಿಕ್ರಿಯೆಗಳು:
Post a Comment