Wednesday, March 24, 2010

ಕಾರಣ?

ಆ ದಿನವೇ ಒಂದು  ವಿಚಿತ್ರ,ವಿಸ್ಮಯ.ಜಗತ್ತು ಬದಲಾಗಿತ್ತು. ಸದಾ ಸೋಲುತ್ತಿದ್ದ ನನಗೆ ಗೆಲುವು ಹತ್ತಿರವಿದೆಯೆನಿಸುತ್ತಿತ್ತು. ಬೆಳಗ್ಗೆ ಎದ್ದ ಕೂಡಲೇ ಕೇಳಿದ ಹಕ್ಕಿಗಳ ಪಿಸುಮಾತು ಮನದಲ್ಲೇನೋ ಸಂಭ್ರಮದ ಅಲೆಯನ್ನೇ ಸೃಷ್ಟಿಸಿತ್ತು. ಮನಸ್ಸು ಕೂಡ ಶುಭ್ರವಾಗಿತ್ತು.ಎಂದೂ ಮೋಡ ಕವಿದಂತೆ ಇರುತ್ತಿದ್ದ ನನ್ನ ಸುತ್ತಲಂತೂ ಇಂದು ತುಂಬಾ ಬೆಳಕಾಗಿತ್ತು. ಕತ್ತಲೆಯ ಸುಳಿವೇ ಇರಲಿಲ್ಲ. ನನಗಂತೂ ಇದು ಭ್ರಮೆಯೋ ಅಥವಾ ನಿಜವೋ ಎಂದು ಸಂಶಯ. ಈ ಸಂತೋಷಕ್ಕೆ ಕಾರಣ?
ಇನ್ನೇನು ಎದ್ದು ನನ್ನ ನಿತ್ಯದ ಕೆಲಸಗಳು. ಸ್ನಾನ,ಧ್ಯಾನ,ಆಹಾರ ಇತ್ಯಾದಿ ಇತ್ಯಾದಿ. ಕೆಲಸಕ್ಕೆ ಹೊರಡುವ ಸಮಯ.ಹೊರಡಲು ಎಷ್ಟು ಸಮಯವಿದ್ದರೂ ನನಗೆಂದೂ ಅದು ಸಾಕಾದ್ದಿಲ್ಲ. ಆದರೆ ಇಂದು ಅದೇಕೋ ಬಹಳವೇ ಉಳಿದಿತ್ತು. ಸಮಯ ಸಾಕಾಗದೆ ಯಾವಾಗಲೂ ಬರುವ ಸಿಟ್ಟು ಇವತ್ತು ಮರೀಚಿಕೆಯಾಗಿತ್ತು. ಉಳಿದ ಸಮಯ ನನಗಂತೂ ಎಷ್ಟೋ ದಿನದ ಬಳಿಕ ದಿನಪತ್ರಿಕೆ ಓದಲನುವು ಮಾಡಿ ಕೊಟ್ಟಿತ್ತು. ನೋಡಿದರೆ ದಿನಪತ್ರಿಕೆಯೂ ಬದಲು! ಪ್ರತಿದಿನ ಕೇವಲ ಕೊಲೆ, ದರೋಡೆ, ರಾಜಕೀಯ, ಓಟು, ಹಣ, ಭ್ರಷ್ಟಾಚಾರ, ಮೋಸಗಳ ಸುತ್ತಲೇ ತಿರುಗುತ್ತಿದ್ದ ವಿಷಯಗಳ ದಿಕ್ಕು ಇಂದು ಒಳ್ಳೆಯ ವಿಷಯಗಳಾದ ಸಾಧನೆ, ಪ್ರಾಮಾಣಿಕತೆ ಇತ್ಯಾದಿಗಳೆಡೆಗೆ ಮುಖ ಮಾಡಿ ನಿಂತಿತ್ತು... ಜಗತ್ತು ತಿರುಗಿ ನಿಂತಂತೆ ಭಾಸವಾಗಿತ್ತು. ಇದೆಲ್ಲ ಕನಸೇ?
ಇನ್ನೇನು ಮನೆ ಬಿಡುವ ಸಮಯ. ಇನ್ದೇನೆ ಆಗಲಿ,ನನ್ನ ದಿನ ಖಂಡಿತ ಚೆನ್ನಾಗಿಯೇ ಇರಬೇಕು ಎಂದು ಎಣಿಸಿಕೊಂಡೇ ಮನಯಿಂದ ಹೊರಗೆ ಕಾಲ್ಕಿತ್ತೆ. ಯಾವತ್ತೂ ತಡವಾಗಿ ಹೋಗಿ ಬಸ್ಸು ಹತ್ತುವ ನನಗೆ ಇಂದು ಸರಿಯಾದ ಸಮಯಕ್ಕೆ ಬಸ್ಸು ಹತ್ತಿದ್ದರಿಂದ ಆಸನದ ವ್ಯವಸ್ಥೆಯೂ ಆಯಿತು! ಯಾವಾಗಲೂ ಪ್ರತಿಯೊಂದರಲ್ಲೂ ತಪ್ಪು,ಕೆಟ್ಟದ್ದನ್ನೇ ಕಂಡು ಹುಡುಕುವ ಮನ ಇವತ್ತೇನೋ ಪ್ರತಿಯೊಂದರಲ್ಲೂ ಒಳ್ಳೆಯ ಸಾರ ಹುದುಕಲಾರಂಭಿಸಿತ್ತು. ಮನೆಯಿಂದ ಕೆಲಸಕ್ಕೆ ತೆರಳಬೇಕಾದ ಪಯಣದ ನಡುವೆ ಬೇರೆ ಪ್ರಯಾಣಿಕರ ಸಣ್ಣ ಮಾತಿನ ಚಕಮಕಿ. ಆ ಚರ್ಚೆ ಬೇಗ ಮುಗಿಯಿತೆಂಬ ಮಂದಹಾಸ ನನ್ನಲ್ಲಿ(ಇಲ್ಲದಿದ್ದರೆ ಅದೆಷ್ಟು ಸಮಯ ಮುಂದುವರೆಯುತ್ತಿತ್ತೋ!!!). ಸ್ವಲ್ಪ ಮುಂದೆ ಚಲಿಸುತ್ತಿದ್ದಂತೆ ವಾಹನ  ದುರಸ್ಥಿ ಮಾಡಬೇಕಾದ ಪ್ರಸಂಗ. ತಡವಾಯಿತೆಂಬ ಚಿಂತೆ ಆಗಬೇಕಿತ್ತಾದರೂ ಬಸ್ಸು ಬೇಗ ಸರಿಯಾಗಬಹುದೆಂಬ ವಿಶ್ವಾಸ. ಬಸ್ಸೂ ಸರಿಯಾಯಿತು. ನನಗೂ ತಡವಾಗಲಿಲ್ಲ. ಆ ನಗು ಇನ್ನೂ ನನ್ನ ಮುಖದಲ್ಲಿತ್ತು. ಏನೇ ಆಗಲಿ ಆ ನಗುವನ್ನು ಕಳೆದುಕೊಳ್ಳಬಾರದೆಂಬ ಭಾವನೆ ನನ್ನಲ್ಲಿತ್ತು.
ಇನ್ನು ಕೆಲಸದ ವಿಚಾರ. ಇಲ್ಲಿ ಸಹಚರರ ಮೇಲೆ ಸಿಟ್ಟು,ಅಭಿಮಾನ,ಬುದ್ಧಿವಾದ,ಆರೋಪ ಎಲ್ಲವೂ ಇದ್ದದ್ದೇ. ಆದರೆ ಇವತ್ತೇನೋ ನನ್ನ ಮೇಲೆ ಸಿಟ್ಟೇ ಬರಲಿಲ್ಲ ಯಾರಿಗೂ. ಕೆಲಸವೂ ಬಹಳ ಸರಾಗವಾಗೇ ಸಾಗಿತ್ತು. ಯಾವಾಗಲೂ ಸಿಡುಕುತ್ತಿದ್ದ ನನಗೆ ಸಿಟ್ಟು ಎಂದರೇನೆಂದೇ ಮರೆತಂತಿತ್ತು! ಹಿಂದಿನ ದಿನಗಳಲ್ಲೆಲ್ಲ ಇಲ್ಲದ್ದ ನೆಮ್ಮದಿ ಇಂದು ಮನಸ್ಸಿಗೆ ಸಿಕ್ಕಿತ್ತು. ಮನಸ್ಸಿಗೆ ವಪಾಸದರೂ ಬೆಳಗ್ಗೆ ಮಕ್ಹ್ಗದಲ್ಲಿದ್ದ ನಗು ಇನ್ನೂ ಮುಖಕ್ಕೆ ಅಂಟಿಸಿದಂತೆ ಹಾಗೇ ಇತ್ತು. ಏನೇ ನೋಡಿದರೂ ಅದರಲ್ಲಿ ಖುಷಿಯನ್ನು ಹೊರತೆಗೆದ ಮನಕ್ಕೆ ಆಯಾಸವೇ ಆಗಿರಲಿಲ್ಲ. ಸಮುದ್ರ ತೀರದಲ್ಲಿ ಬೀಸುವ ತಂಪು ಗಾಳಿಯಲ್ಲಿ ಹಾರಾಡುವ ಹಕ್ಕಿಯನ್ತಿತ್ತು ಮನ. ಮಲಗುವ ಮುಂಚೆ ತಲೆಯಲ್ಲಿದ್ದುದು ಒಂದೇ ಪ್ರಶ್ನೆ! ಈ ಬದಲಾವಣೆ ಹೇಗಾಯ್ತು???
ಹೀಗೆ ಇರಲಿ ಪ್ರತಿದಿನ. ಮಾಸದಿರಲಿ ಆ ನಗು. ಬೇಡ ಮನದ ರೋದನ. ಹಸನ್ಮುಖಿಯಾಗಿರುವುದೇ ಸಂತಸದ ಸಾಧನ.
ನಗುನಗುತಾ ನಲಿ, ಏನೇ ಆಗಲಿ!

0 ಪ್ರತಿಕ್ರಿಯೆಗಳು:

Post a Comment